ಸ್ಟಿತ್, ತಾಮ್‍ಸನ್
	1885-1976. ಅಮೆರಿಕದ ಪ್ರಸಿದ್ಧ ಜಾನಪದ ವಿದ್ವಾಂಸ. ತಂದೆ ಜಾನ್‍ವಾರ್ಡನ್, ತಾಯಿ ಎಲಿಜ ತಾಮ್‍ಸನ್. ಈತ 1885 ಮಾರ್ಚ್ 7ರಂದು ಬ್ಲೂಂಫೀಲ್ಡ್‍ನ ಕೆಂಟುಕಿಯಲ್ಲಿ ಜನಿಸಿದ. ಈತ ಇಂಡಿಯಾನ ಪೊಲಿಸ್ ಬಟ್ಲರ್ ಕಾಲೇಜಿನ ವಿದ್ಯಾರ್ಥಿ. 1909ರಲ್ಲಿ ಇಂಡಿಯಾನದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಪದವಿಗಳಿಸಿ 1912ರಲ್ಲಿ ಸ್ನಾತಕೋತ್ತರ ಪದವಿಯನ್ನು ಕ್ಯಾಲಿಫೋರ್ನಿಯದಲ್ಲಿ ಮುಗಿಸಿದ. ತರುವಾಯ 1914ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟೊರೇಟ್ ಪದವಿಗಳಿಸಿದ. 1918 ಜೂನ್ 14ರಂದು ಲೂಯಿಸ್ ಫಾಸ್ಟ್‍ಳನ್ನು ವಿವಾಹವಾದ. ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಆಂಗ್ಲ ಭಾಷಾ ಉಪನ್ಯಾಸಕನಾಗಿ (1914-18) ಕಾರ್ಯನಿರ್ವಹಿಸುತ್ತಲೇ ಟೆಕ್ಸಾಸ್ ಫೋಕ್‍ಲೋರ್ ಸೊಸೈಟಿಯಲ್ಲಿ ಕಾರ್ಯದರ್ಶಿ, ಖಜಾಂಚಿಯಾಗಿ ಕಾರ್ಯನಿರ್ವಹಿಸಿದ. ಈ ಸೊಸೈಟಿ ಪ್ರಥಮವಾಗಿ ಪ್ರಕಟಿಸಿದ ಪುಸ್ತಕಗಳಿಗೆ ಈತ ಸಂಪಾದಕನಾಗಿದ್ದ(1916). ಪುನರ್ ಮುದ್ರಣಗೊಂಡ ರೌಂಡ್ ದಿ ಲೆವ್ಹಿ(1935) ಎಂಬ ಕೃತಿಯ ಮುನ್ನುಡಿಯಲ್ಲಿ ಜೆ.ಫ್ರಾಂಕ್ ಡೊಬಿ, ತಾಮ್‍ಸನ್‍ನ ಸಹಯೋಗದಲ್ಲಿ ಪ್ರಕಟಗೊಂಡ ಕೃತಿಗಳನ್ನು ಪ್ರಶಂಸಿಸುತ್ತ, ಇವು ಸಮಾಜದ ಚಿಂತನೆಗಳಿಗೆ ಮಹತ್ತ್ವವಾದುವು ಎಂದಿದ್ದಾರೆ. ಇದಲ್ಲದೆ ಇತರ ರಾಷ್ಟ್ರದ ರಾಜ್ಯಗಳು ಟೆಕ್ಸಾಸ್ ಆರ್ಗನೈಸೇಷನ್ಸ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿವೆ. 

	ಈತ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಹೊರಬಂದ ಅನಂತರ ಮೈನೆ ವಿಶ್ವವಿದ್ಯಾಲಯದ ಕಾಲರಾಡೋ ಕಾಲೇಜಿನಲ್ಲಿ (1918-20) ಹಾಗೂ ಇಂಡಿಯಾನ ವಿಶ್ವವಿದ್ಯಾಲಯದಲ್ಲಿ (1921-55) ಆಂಗ್ಲ ಪ್ರಾಧ್ಯಾಪಕನಾದ. ಅದೇ ವಿಶ್ವವಿದ್ಯಾಲಯದಲ್ಲಿ ಜಾನಪದ ಪದವಿ ವಿಷಯಗಳಿಗೆ ಬೋಧನೆ ಮಾಡಿದ. ಪದವಿಶಾಲೆಯ ವಿದ್ಯಾರ್ಥಿ ಕ್ಷೇಮಪಾಲಕನಾದ (1940-50). ಅಮೆರಿಕ ಸಂಯುಕ್ತ ಸಂಸ್ಥಾನಗಳ ಹಾಗೂ ಪ್ಯಾರಿಸ್‍ನಲ್ಲಿ ಜರುಗಿದ(1937) ಅಂತಾರಾಷ್ಟ್ರೀಯ ಫೋಕ್ ಲೋರ್ ಕಾಂಗ್ರೆಸ್‍ನಲ್ಲಿ ಆಹ್ವಾನಿತನಾಗಿ ಪಾಲ್ಗೊಂಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನ, ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಿದ. 

	ಈತ ಜಾನಪದ ಕ್ಷೇತ್ರಕ್ಕೆ ಸಂಬಂಧಪಟ್ಟ ಹಲವಾರು ಕೃತಿಗಳನ್ನೂ ಲೇಖನಗಳನ್ನೂ ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದಾನೆ. ಇವನ ದಿ ಕ್ಲಾಸಿಫಿಕೇಷನ್ ಆಫ್ ಮೋಟಿವ್ಸ್ ಇನ್ ಫೋಕ್‍ಟೇಲ್ಸ್ ಕೃತಿ ಪ್ರಪಂಚದ ಜನಪದ ಕಥಾ ಆಶಯ ವರ್ಗೀಕರಣಗಳನ್ನು ಹೊಂದಿದ ಮಹತ್ತ್ವದ ಕೃತಿಯೆನಿಸಿದೆ. ಈತ ಮೋಟಿಫ್ ಇಂಡೆಕ್ಸ್ ಆಫ್ ಫೋಕ್ ಲಿಟರೇಚರ್ (1932-37) ಕೃತಿ ಆರು ಸಂಪುಟಗಳಲ್ಲಿದೆ. ಈ ಕೃತಿ ಪರಿಷ್ಕಾರಗೊಂಡು ಮತ್ತೆ ಪ್ರಕಟವಾಗಿದೆ. ಇಲ್ಲಿ ಕತೆ, ಪುರಾಣ, ಸಾಹಿತ್ಯವನ್ನು ವಿವಿಧ ದೃಷ್ಟಿಕೋನಗಳಿಂದ ಗಮನಿಸಿ, ಹೊಸ ಹೊಸ ಅಧ್ಯಯನ ವರ್ಗೀಕರಣಗಳನ್ನು ಸೇರಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಪಾರಂಪರಿಕ ಭೌತಿಕ ವಿಚಾರಗಳ ಅಧ್ಯಯನವೂ ಇಲ್ಲಿದೆ. ಕೃತಿಯ ವಿದ್ವತ್ತು, ಪ್ರೌಢಿಮೆಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಹೆಚ್ಚಿನ ಮಹತ್ತ್ವ ಪಡೆದಿದೆ. ಈತ ಇಂಡಿಯಾನ ವಿಶ್ವವಿದ್ಯಾಲಯದ ಇಂಗ್ಲಿಷ್ ಹಾಗೂ ಜಾನಪದ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತಿ ಹೊಂದಿದ ಮೇಲೆ (1955) ಪತ್ನಿಯೊಡನೆ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಂಡ. ಜಾನಪದ ಅಧ್ಯಯನ ಅನ್ವೇಷಣೆಗಳಲ್ಲಿ ತೊಡಗಿದ. ಈತ ತನ್ನ ಆತ್ಮ ಚರಿತ್ರೆಗಳನ್ನು ಬರೆದ (1956-66). ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿದ. ಜನಪದ ಕಥಾಕಣಜ ಎನ್ನಿಸಿಕೊಂಡಿದ್ದ ಈತ  1976 ಜನವರಿ 13ರಂದು ಇಂಡಿಯಾನ ಕೊಲಂಬಸ್ ನಗರದಲ್ಲಿ ನಿಧನನಾದ.	
											(ಪಿ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ